ಚೆಟ್ಟಿ, ಎಂ ಎ  
(1907-2002). ಮುರಿಗೆಪ್ಪ ಅಡವೆಪ್ಪ ಚೆಟ್ಟಿಯವರು ಬೆಳಗಾವಿಯ ಅಥಣಿಯಲ್ಲಿ 8-3-1907 ರಂದು ಜನಿಸಿದರು (ಕೆಲವೆಡೆ ಮಾರ್ಚಿ ತಿಂಗಳೆಂದು ತಪ್ಪಾಗಿ ನಮೂದಾಗಿದೆ). ಮಾಧ್ಯಮಿಕ ಶಿಕ್ಷಣದೊಂದಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಮುಂಬಯಿಯ ಜೆ.ಜೆ. ಕಲಾಶಾಲೆಯಿಂದ ಚೆನ್ನೈ ಹಾಗೂ ಬೆಳ್ಳಿ ಪದಕ ಡಿಪ್ಲೊಮಾ ಪದವಿ ಪಡೆದರು. ಮುಂದೆ ಸೊಲ್ಲಾಪುರದಲ್ಲಿದ್ದಾಗ ಕಲಾ ಸ್ಪರ್ಧೆಯೊಂದರಲ್ಲಿ ವಿಶ್ವರೂಪದರ್ಶನ ಚಿತ್ರ ರಚಿಸಿ ಪ್ರಥಮ ಬಹುಮಾನ ಪಡೆದುದು ಮುಂದಿನ ಕಲಾವೃತ್ತಿ ಜೀವನಕ್ಕೆ ನಾಂದಿಯಾಯಿತು. ಅಲ್ಲಿ ಸಾಕಷ್ಟು ಕಲಾಕೃತಿಗಳ ರಚನೆ ಮಾಡಿದ್ದು ಮುಂದೆ ತಮ್ಮ ಎಂದಿನ ಆಶ್ರಯದಾತ ಚಿಕ್ಕಪ್ಪನವರ ಆದೇಶದಂತೆ ಗದುಗಿಗೆ ಬಂದು ಅಲ್ಲಿಯೇ ನೆಲೆನಿಂತರು. ಕೌಟುಂಬಿಕ ಸಾಲಗಳ ತೀರುವಳಿಯಲ್ಲದೆ ಈಗಾಗಲೇ ವಿವಾಹಿತರಾಗಿದ್ದ ಚೆಟ್ಟಿಯವರ ಸಾಂಸಾರಿಕ ವೆಚ್ಚಗಳ ಪೂರೈಕೆಯೂ ಕಲಾಕೃತಿ ರಚನೆಗಳಿಂದ ನಡೆಯುತ್ತಿದ್ದು ಸಾಕಷ್ಟು ಸಂಖ್ಯೆಯಲ್ಲಿ ಕೃತಿ ರಚನೆ ಮಾಡಿದರು.

ಇದೇ ವೇಳೆಗೆ ಟಿ.ಪಿ.ಅಕ್ಕಿಯವರು ಆರಂಭಿಸಿದ ವಿಜಯ ಕಲಾ ಮಂದಿರದಲ್ಲಿ ಕಲಾಶಿಕ್ಷಕರಾಗಿ ನಂತರ ಉಪ ಪ್ರಾಚಾರ್ಯರಾಗಿ ಸೇವೆಸಲ್ಲಿಸುವ ಅವಕಾಶ ದೊರೆಯಿತು. 1947ರಿಂದ 1972ರವರೆಗೆ ಸೇವೆ ಸಲ್ಲಿಸಿದ್ದು ನಿವೃತ್ತಿಯ ನಂತರವೂ ಕಲಾಶಾಲೆಯೊಂದಿಗೆ ಸಂಪರ್ಕವಿರಿಸಿಕೊಂಡಿದ್ದರು. ಕಲಾ ಶಿಕ್ಷಕರಾಗಿದ್ದಾಗ ಮುಂಬಯಿ ಹಾಗೂ ಪುಣೆಗಳಲ್ಲಿ ಕಲಾಪರೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಗೋಕಾಕ್ ವರದಿ ಜಾರಿಗಾಗಿ ಉಳಿದವರೊಂದಿಗೆ ಉಪವಾಸ ಸತ್ಯಾಗ್ರಹ ಕೂಡ ಮಾಡಿದ್ದರು.
ಚೆಟ್ಟಿಯವರು ರಚಿಸಿದ ಕಲಾಕೃತಿಗಳ ಲೆಕ್ಕ ಪರಿಪೂರ್ಣವಾಗಿ ದೊರೆಯುವುದಿಲ್ಲ. ಶ್ರವಣ ಬೆಳಗೊಳದ ಬಿತ್ತಿ ಚಿತ್ರಗಳನ್ನು ಪ್ರತಿಮಾಡುವುದೂ ಸೇರಿದಂತೆ ಕಿತ್ತೂರು ಚೆನ್ನಮ್ಮ, ಡಿ.ಸಿ.ಪಾವಟೆ, ರಂಗರಾವ್ ದಿವಾಕರ, ತೋಂಟದಾರ್ಯ ಜಗದ್ಗುರುಗಳು, ಹಳ್ಳಿಕೇರಿ ಗುದ್ಲೆಪ್ಪ, ಮುರುಘರಾಜೇಂದ್ರ ಶ್ರೀಗಳು. ಇಂದಿರಾಗಾಂಧಿ, ಜಯಚಾಮರಾಜೇಂದ್ರ ಒಡೆಯರ್ ಮುಂತಾದವರ ಭಾವಚಿತ್ರಗಳು, ಭಗವದ್ಗೀತೆಯೂ ಸೇರಿದಂತೆ, ಚಳ್ಳಗುರ್ಕೆ ಎರ್ರಿ ತಾತರ ಚರಿತ್ರೆ, ಅಪರಾದಿಯ ಫಿಲಾರೇಶ್ವರ ಪುರಾಣ, ನಿಜಲಿಂಗೇಶ್ವರ ಪುರಾಣ, ಸಾವಳಗಿ ಶಿವಲಿಂಗೇಶ್ವರ ಪುರಾಣ, ಬಸವಪುರಾಣ, ಮುರುಘರಾಜೇಂದ್ರ ಪುರಾಣ, ಚಾಮರಸನ ಪ್ರಭುಲಿಂಗಲೀಲೆ, ಚನ್ನಬಸವಪುರಾಣ, ಮುಳಗುಂದದ ಬಾಲಲೀಲಾಸ್ವಾಮಿ ಪುರಾಣ ಇವೇ ಮುಂತಾದ ಪುಸ್ತಕಗಳಲ್ಲಿ ಪೂರಕ ಚಿತ್ರಗಳೆಂಬಂತೆ ಅಳವಡಿಸಲು ಸಾವಿರಾರು ಚಿತ್ರಗಳನ್ನು ರಚಿಸಿ ನೀಡಿದ್ದಾರೆ. ಚೆಟ್ಟಿಯವರದೇ ದಿನಚರಿಯಿಂದ 1928 ರಿಂದ 87ರ ವರೆಗೆ ಸುಮಾರು ಒಂಬತ್ತು ಸಾವಿರ ಕೃತಿಗಳನ್ನು ರಚಿಸಿದಂತೆ ತಿಳಿದುಬರುತ್ತದೆ. ಮುರಿಗೆಪ್ಪ ಚೆಟ್ಟಿಯವರ ಬಗ್ಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ದಿಂದ ಸಂಶೋಧನಾ ಗ್ರಂಥ ರಚಿಸಿ ಪಿಎಚ್‍ಡಿ ಪದವಿ ಪಡೆದಿರುವ ಲಕ್ಷ್ಮೀದೇವಿ ಗವಾಯಿಯವರು ಚೆಟ್ಟಿಯವರ ಜೀವನ, ಸಹಪಾಠಿಗಳು, ವೃತ್ತಿಸಾಧನೆ ಹಾಗೂ ಕಲಾಕೃತಿಗಳ ಬಗ್ಗೆ ಆಳವಾಗಿ ಅಭ್ಯಾಸಮಾಡಿದ್ದಾರೆ. ಗ್ರಂಥದಲ್ಲಿ ಚೆಟ್ಟಿಯವರ ರೇಖಾ ಚಿತ್ರಗಳು, ಭಾವಚಿತ್ರ, ಸಂಯೋಜನಾ ಚಿತ್ರ, ಗ್ರಂಥಗಳಿಗೆ ಪೂರಕ ಚಿತ್ರಗಳು ಇತ್ಯಾದಿ ಸುಮಾರು ನಾನೂರು ಚಿತ್ರಗಳನ್ನು ವಿಮರ್ಶಿಸಿದ್ದಾರೆ. 

ಬೇಡಿಕೆಗಾಗಿ ಪೂರೈಸಿದ ಭಾವಚಿತ್ರಗಳು ಭಾವಪೂರ್ಣವಾಗಿ ನೈಜಶೈಲಿಯಲ್ಲಿದ್ದರೂ ಉಳಿದಂತೆ ರೂಪದರ್ಶಿ ಇರಿಸಿ ಅಭ್ಯಾಸಕ್ಕಾಗಿ ಹಾಗೂ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡುವ ವೇಳೆಯಲ್ಲಿ ರಚಿಸಿರುವುದು. ಇವುಗಳಲ್ಲೂ ತೀರ ಜನಸಾಮಾನ್ಯರ ಆರ್ಥಿಕವಾಗಿ ಹಿಂದುಳಿದವರ, ಲಂಬಾಣಿಗಳ ಆದರೆ ಚಿತ್ರರಚನೆಗೆ ಸೂಕ್ತವೆಂಬಂತೆ ಮೈಕಟ್ಟು ಉಳ್ಳವರ ಚಿತ್ರಗಳಿದ್ದು, ಚೆಟ್ಟಿಯವರ ಕಲಾತ್ಮಕ ದೃಷ್ಟಿ ಸ್ಪಷ್ಟವಾಗಿ ಕಂಡು ಬರುತ್ತದೆ. ಸಂಯೋಜನಾ ಚಿತ್ರಗಳು ಸ್ವಲ್ಪಮಟ್ಟಿಗೆ ಜನಪದ ಶೈಲಿ ಎಂದೆನಿಸಿದರೂ ನೈಜ ಶೈಲಿಯ ಹಲವಾರು ವ್ಯಕ್ತಿಗಳು, ಪ್ರಕೃತಿ, ಹಿನ್ನೆಲೆ-ಮುನ್ನೆಲೆಗಳಿಂದ ಕೂಡಿ ಒಂದು ಕಥಾ ಸಂದರ್ಭದ ದೃಶ್ಯವನ್ನು ವಿವರವಾಗಿ ಪುನರ್ ಉಲ್ಲೇಖಿಸುವಂತೆ ಮಾಡುತ್ತದೆ. ಫಲಕದಲ್ಲಿ ಅಷ್ಟೊಂದು ವ್ಯಕ್ತಿಗಳು ವಸ್ತುಗಳು ಇದ್ದರೂ ವಿವರಗಳು ಗೊಂದಲವಾಗ ದಂತೆ ಆಕಾರಗಳು ಅಡ್ಡಹಾಯ್ದುಹೋಗದಂತೆ ಜಾಣ್ಮೆಯಿಂದ ರೂಪಿಸಿರುವಂತಹದು. ಆಕಾರಗಳ ಭಾವಭಂಗಿಗಳು ವೈವಿಧ್ಯ ಹೊಂದಿದ್ದು ವಿವಿಧ ದೃಷ್ಟಿಕೋನಗಳಿಂದ ಕಾಣುವಂತೆ ರಚಿಸಿರುವಂತಹದು. ಈ ಬಗೆಯ ಸಂಯೋಜನೆ ಸಾಧ್ಯವಾಗಿರುವುದು ಚೆಟ್ಟಿಯವರು ದೈನಂದಿನ ಕಾಯಕವೆಂಬಂತೆ, ಪ್ರತಿನಿತ್ಯದ ದೃಶ್ಯಗಳನ್ನು `ಸ್ಕೆಚ್ ಮಾಡುತ್ತಿದ್ದುದೇ ಆಗಿದೆ. ಈ ಬಗೆಯ ಶ್ರೇಷ್ಠ ಬಿಡುಗೈ ರೇಖಾ ಚಿತ್ರಗಳ (ರ್ಯಾಪಿಡ್ ಸ್ಕೆಚ್ಚಿಂಗ್) ಸಂಪುಟಗಳೇ ಅವರಲ್ಲಿದ್ದುವು.

ಚೆಟ್ಟಿಯವರು ವ್ಯಾಪಕವಾಗಿ ದೇಶಸಂಚಾರ ನಡೆಸಿ ಸ್ಥಳದಲ್ಲೇ ಚಿತ್ರರಚಿಸಿರುವರಾದರೂ ವ್ಯವಸ್ಥಿತವಾಗಿ ಪ್ರದರ್ಶಿಸಿದ ಅಥವಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಕಡಿಮೆ. ಸ್ಥಳೀಯವಾಗಿ ಏಕವ್ಯಕ್ತಿ ಪ್ರದರ್ಶನ ಮಾಡಿದ್ದಿರಬಹು ದಾದರೂ ಹೊರ ಶಹರ, ರಾಜ್ಯಗಳಲ್ಲಿ ಮಾಡಿದಂತಿಲ್ಲ. ಸೊಲ್ಲಾಪುರದಲ್ಲಿ ಭಗವದ್ಗೀತೆಯ ಚಿತ್ರಕ್ಕೇ ಬಹುಮಾನ ಬಂದಂತೆ ಅಕ್ಕಲಕೋಟೆಯ ಮಹಾರಾಜರು ಇವರ ಕಲಾಕೃತಿಗಳನ್ನು ಮೆಚ್ಚಿ ಸುವರ್ಣ ಪದಕವಿತ್ತು ಗೌರವಿಸಿದ್ದರು. ವಿದ್ಯಾರ್ಥಿದೆಸೆಯಲ್ಲಿದ್ದಾಗ ಗ್ಲಾಂಡ್‍ಸ್ಟನ್ ಸಾಲೋಮನ್ ಅವರ ವಿದ್ಯಾರ್ಥಿವೇತನ (1936) ಪ್ರದರ್ಶನ, ಸೊಲ್ಲಾಪುರದ ಪ್ರದರ್ಶನ, (1939) ಅಖಿಲಭಾರತ 45ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕಾರವಾರ (1965) ಮೈಸೂರು ದಸರಾ ಪ್ರದರ್ಶನ (1975), ಏಳನೇ ಅಖಿಲ ಕರ್ನಾಟಕ ಜನಪದ ಸಮ್ಮೇಳನ (1980), ಅಖಿಲ ಭಾರತ ವೀರಶೈವ ಮಹಾಸಭಾದವರ ಇಪ್ಪತ್ತನೇ ಅಧಿವೇಶನ (ಮೈಸೂರು 1983) ಗಳಲ್ಲಿ ಪ್ರಶಸ್ತಿ, ಸನ್ಮಾನಗಳು ಬಂದಿದ್ದವು. ರಾಜ್ಯ ಲಲಿತಕಲಾ ಪ್ರಶಸ್ತಿ (1988) ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ (1996) ಹಾಗೂ ಎಂಟಿವಿ ಆಚಾರ್ಯ ಪ್ರಶಸ್ತಿ (1996)ಗಳು ದೊರೆತಿದ್ದವು. ಚೆಟ್ಟಿಯವರು 25.5.2002 ರಲ್ಲಿ ನಿಧನಹೊಂದಿದರು.					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ